ಕರ್ತವ್ಯ -Priyanka_rosenknospe

posted Jan 16, 2015, 6:54 PM by A Billion Stories
ಪ್ರವೀಣನಿಗೆ ಮದುವೆಗಾಗಿ ಮನೆಯಲ್ಲಿ ಸಂಬಂಧ ಹುಡುಕುತ್ತಿದ್ದರು.
ಅವನು ಎಂ.ಎಸ್ ಮುಗಿಸಿಕೊಂಡು ಕೆಲಸಕ್ಕಾಗಿ ವಿದೇಶಕ್ಕೆ ಹೋಗುವ ಮುನ್ನ ಮದುವೆ ಮಾಡಿಬಿಡುವ ಆತುರ ಸಾವಿತ್ರಮ್ಮನವರಿಗೆ.
ತಂದೆಯಿಲ್ಲದ, ಒಬ್ಬನೇ ಮಗನನ್ನು ಹತ್ತು ಮಾತು ಕೇಳಿಕೊಂಡೂ ಓದಿಸಿ,ಕೊಂಕು ಮಾಡಿದವರ ಮುಂದೆ ಬಿಂಕದಿಂದ ಹೆಮ್ಮೆಯಿಂದ ಜೀವನ ನಡೆಸುವಂತೆ ಮಾಡಿದ ಸಾವಿತ್ರಮ್ಮ, ಮಗನಿಗೆ ಮದುವೆ ಒಂದು ಮಾಡಿ ನೆಮ್ಮದಿಯಾಗಿ ಉಸಿರು ಬಿಡುವ ಪಣ ತೊಟ್ಟರು..
ಭದ್ರಾವತಿಯ ಮೂಲದವರಾದ ಸಾವಿತ್ರಮ್ಮ ಅವರ ತಮ್ಮ ಚಂದ್ರಶೇಖರನನ್ನು ಬರಹೇಳಿದ್ದು ಪ್ರವೀಣ್ ಮದುವೆ ವಿಚಾರಕ್ಕಾಗಿಯೇ.
ಪ್ರವೀಣನಿಗೆ ಮದುವೆ,ಸಂಸಾರ ಅಂದರೆ ಆಗದು.
"ಅಮ್ಮ,ಜೀವನದಲ್ಲಿ ಅದೇ ಗುರಿ ಅಲ್ಲಮ್ಮ " ಎನ್ನುತ್ತಿದ್ದ.
ಆದರೂ, ತಾಯಿ ತನ್ನ ಕರ್ತವ್ಯ ಮರೆಯುವಳೇ?
ಅಂತೂ ತಮ್ಮ ಚಂದ್ರಶೇಖರನ ಕರೆಸಿ ಹೊಸಮನೆಯ ಒಂದು ಹುಡುಗಿಯ ಬಗ್ಗೆ ವಿಚಾರಿಸಿದ್ದಾಯಿತು.
ಹುಡುಗಿಯು ಬಿ.ಎ ಓದಿದ್ದಾಳೆ.
ಹೊಸಮನೆ ಸರ್ಕಲ್ ಹತ್ತಿರದ ಸರಕಾರಿ ಲೈಬ್ರರಿಯಲ್ಲಿ ಕೆಲಸ, ಒಳ್ಳೆಯ ಹುಡುಗಿ ..ಮನೆಯ ಕೆಲಸದಲ್ಲಂತೂ ತುಂಬಾ ಅಚ್ಚುಕಟ್ಟು .
ತಂದೆ ರೈಲ್ವೆ ಇಲಾಖೆಯಲ್ಲೆ ಕೆಲಸದಲ್ಲಿದ್ದಾರೆ .ತಾಯಿ ಇಲ್ಲದ ಮಗು.
ಒಬ್ಬ ತಮ್ಮ ಇದ್ದಾನೆ..
ಪಾಪ. ಅನ್ನಿಸಿತು .. ತಾಯಿ ಇಲ್ಲದ ಹೆಣ್ಣು ಮಕ್ಕಳ ಕಷ್ಟ ಏನೆಂದು ಸ್ವತಃ ಆಕೆಗೆ ಗೊತ್ತಿದೆ..
ತಾಯಿಯನ್ನು ಚಿಕ್ಕ ವಯಸ್ಸಲ್ಲೇ ಕಳೆದುಕೊಂಡ ಸಾವಿತ್ರಮ್ಮನ ಕಣ್ಮುಂದೆ ಸಾವಿರ ನೆನಪು ಹಾದುಹೋದವು..
ಸ್ವಲ್ಪ ಕಣ್ಣಂಚಿನಲ್ಲಿದ್ದ ನೀರನ್ನು ಒರೆಸಿಕೊಂಡ ಸಾವಿತ್ರಮ್ಮ ಆ ಹುಡುಗಿಯನ್ನು ನೋಡಲು ಇದೇ ಮಂಗಳವಾರ ಹೋಗುವುದು ಎಂದು ಅದಕ್ಕಾಗಿ ಸಿದ್ಧತೆಯಲ್ಲಿ ತೊಡಗಿಕೊಂಡರು.
ಸಾವಿತ್ರಮ್ಮ ದೆಹಲಿಯಲ್ಲಿ ಕೆಲಸದ ಮೇಲೆ ಹೋಗಿದ್ದ ಪ್ರವೀಣನಿಗೆ ತಕ್ಷಣ ಹೊರಟು ಬರಲು ಹೇಳಿ ಪತ್ರ ಬರೆದರು.

ಇನ್ನು ತನ್ನ ಜವಾಬ್ದಾರಿಯೆಲ್ಲವೂ ಮುಗಿವುದು ಎಂದು ತಾಯಿಯು ಸಂತಸಪಟ್ಟಳು.
ಮರುದಿನವೇ ಎಲ್ಲ ಸಂಭ್ರಮದಿಂದ ತಯಾರಿ ನಡೆದಿತ್ತು.
ಹುಡುಗಿಯ ತಂದೆ ಬಹಳ ಸಂತೋಷದಿಂದ ಅವರ ಬರುವಿಕೆಗಾಗಿ ಕಾದು, ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದರು.
ಸಾವಿತ್ರಮ್ಮ ಗಣಪತಿ ಭಟ್ಟರಿಗೆ ಜಾತಕ ತೋರಿಸಿ, ಎಲ್ಲಾ ಸರಿಯಾಗಿದೆ ದೋಷಗಳೇನೂ ಇಲ್ಲವೆಂದು ತಿಳಿದು ಬಹಳ ಸಂತಸ ಪಟ್ಟರು. ಅಲ್ಲಿಯೇ ದೇವಸ್ಥಾನಕ್ಕೆ ಹೋಗಿ ಮಗನ ಹೆಸರು ಹೇಳಿ ಅರ್ಚನೆ ಮಾಡಿಸಿದರು.
ಮನೆಗೆ ಬಂದಾಗ ನಾಲ್ಕು ಘಂಟೆ ಸಾಯಂಕಾಲ..
ಅವರಿಗಾಗಿ ಬಾಗಿಲ ಬಳಿ ಪೋಸ್ಟಮನ್ ನಾಗರಾಜ ಕಾಯುತ್ತ ನಿಂತಿದ್ದ..
ಮಗನಿಂದ ಕಾಗದ ಬಂದಿತ್ತು..ಮೊದಲು ಮಗನ ಪತ್ರ ಬಂದರೆ ಸಂತೋಷಪಡುತ್ತಿದ್ದ
ಸಾವಿತ್ರಮ್ಮ ಇಂದು ಸ್ವಲ್ಪ ಹೆದರುತ್ತಲೆ ಕಾಗದ ಬಿಡಿಸಿ ಓದತೊಡಗಿದರು.


ಅಮ್ಮ,
ನಾನು ನಿನ್ನ ಪತ್ರ ಓದಿದೆ.
ನಿನಗೆ ಹೇಗೆ ಹೇಳುವುದೋ ತಿಳಿದಿಲ್ಲ..
ನಾನು ಇಲ್ಲಿ ಕೆಲಸ ಸಿಗದೇ ನಿನಗೆ ಪತ್ರ ಬರೆದ ಮರುದಿನವೇ ನನಗೊಬ್ಬರು ಪರಿಚಯವಾದರು.
ಅವರ ಹೆಸರಾಂತ ಕಂಪನಿಯಲ್ಲಿಯೇ ನನಗೊಂದು ಕೆಲಸ ಕೊಟ್ಟ ಮಹಾನ್ ವ್ಯಕ್ತಿ ಅವರು.
ನನಗೆ ಕಷ್ಟ ಬಂದಾಗಲೆಲ್ಲ ತಂದೆಯ ರೀತಿ ನಿಂತು ಸಹಾಯ ಮಾಡಿದ್ದಾರೆ.
ಅವರು ಈಗ ಹಾಸಿಗೆ ಹಿಡಿದಿದ್ದಾರೆ.
ಅವರ ಒಬ್ಬಳೇ ಮಗಳು ಅನು.
ಅವರ ಕಾಯಿಲೆ ವಾಸಿಯಾಗದೆಂದು, ಅನು ವನ್ನು ನಾನು ಮದುವೆಯಾಗಬೇಕೆಂದು ಅವರ ಆಸೆ.
ಅಮ್ಮ,
ನೀನೇ ಹೇಳಿದ್ದೆ, ಕಷ್ಟಕ್ಕೆ ಆದವರನ್ನು ಕೈಬಿಡಬಾರದೆಂದು.
ನಾನು ನಿನ್ನ ಮಾತನ್ನು ಪಾಲಿಸುವುದು ನಿನಗೆ ಖುಷಿ ಅಲ್ಲವೇನಮ್ಮ?
ದಯವಿಟ್ಟು ನನ್ನ ಮದುವೆಗೆ ಬಂದು ನಮ್ಮನ್ನು ಆಶೀರ್ವದಿಸು..ಅನು ನಿನಗೆ ತಕ್ಕ ಸೊಸೆ ಅಮ್ಮ..
ಇಂತಿ,
ಪ್ರೀತಿಯ ಮಗ
ಪ್ರವೀಣ್

ಪತ್ರದ ಜೊತೆಗೇ ಕಾರ್ಡ್ ಒಂದು ಕಾಣಿಸಿತು...

ತಾಯಿ ಹೃದಯ ಹೆಮ್ಮೆ ಪಡಬೇಕೊ ಅಥವಾ ಅಳಬೇಕೋ ಅರಿಯದೆ ತಳಮಳಗೊಂಡಿತು ...
ತಾನು ಕರ್ತವ್ಯವನ್ನು ನಿಭಾಯಿಸಲಿಲ್ಲ ಅನ್ನುವ ಕೊರಗಿನಿಂದ ಆ ಜೀವ ನೊಂದು
ಕಾಣದ ಊರಿಗೆ ಪಯಣ ಬೆಳೆಸಿತ್ತು.


-Priyanka_rosenknospe

Photo by: Priyanka Rosenknospe
Submitted by: Priyanka_rosenknospe
Submitted on: Wed Jan 14 2015 17:25:34 GMT+0530 (IST)
Category: Original
Language: ಕನ್ನಡ/Kannada


- Read submissions at http://abillionstories.wordpress.com
- Submit a poem, quote, proverb, story, mantra, folklore, article, painting, cartoon, drawing, article in your own language at http://www.abillionstories.com/submit

Comments