ಒಬ್ಬ ತಾಯಿಯ ಕಥೆ -Susan

posted Apr 28, 2014, 2:02 AM by A Billion Stories
ಒಬ್ಬ ತಾಯಿ ತನ್ನ ಪುಟ್ಟ ಮಗುವಿನ ಬಳಿ ಕುಳಿತಿದ್ದಳು. ಅವಳು ಬಹಳ ಖಿನ್ನತೆಯಲ್ಲಿದ್ದಳು, ತನ್ನ ಮಗುವು ಸತ್ತು ಹೋಗುವುದು ಎಂಬ ಭಯದಲ್ಲಿದ್ದಳು! ಅವಳ ಮಗುವು ಬಹಳ ಬಳಲಿತ್ತು. ಅದರ ಪುಟ್ಟ ಕಣ್ಣುಗಳು ಮುಚ್ಚಿತ್ತು ಮತ್ತು ಅದು ಬಹಳ ನಿಧಾನವಾಗಿ ಉಸಿರಾಡುತ್ತಿದ್ದು, ಆಗಿಂದಾಗ ನಿಟ್ಟುಸಿರಿನಂತಹ ಭಾರಿ ದೀರ್ಘಶ್ವಾಸವನ್ನು ಬಿಡುತ್ತತ್ತು. ಆಗ ಆ ತಾಯಿಯು ಇನ್ನೂ ಹೆಚ್ಚು ದುಃಖದಿಂದ ಆ ಎಳೆ ಕೂಸನ್ನು ನೋಡುತ್ತಿದ್ದಳು.

ಆಗ ಯಾರೋ ಬಾಗಿಲು ತಟ್ಟುವ ಶಬ್ದವು ಕೇಳಿಸಿತು ಮತ್ತು ಕುದುರೆ ಚರ್ಮದಿಂದ ತಯಾರಿಸಲ್ಪಟ್ಟ ದೊಡ್ಡ ಬಟ್ಟೆಯಂತಹ ಒಂದನ್ನು ಹೊದ್ದುಕೊಂಡಿದ್ದ ಒಬ್ಬ ಬಡಕಲು ಮುದುಕನು ಒಳಗೆ ಬಂದನು. ಅದು ಕಟು ಚಳಿಗಾಲವಾಗಿದ್ದುದರಿಂದ ನಿಜಕ್ಕೂ ಅವನಿಗೆ ಅಂತಹ ಒಂದು ಬಟ್ಟೆಯ ಅವಶ್ಯಕತೆಯಿತ್ತು! ಹೊರಗೆ ಎಲ್ಲವೂ ಬರ್ಫ ಮತ್ತು ಹಿಮದಿಂದ ಮುಚ್ಚಲ್ಪಟ್ಟಿತ್ತು ಹಾಗೂ ಮೈ ಚರ್ಮವನ್ನು ಸೀಳಿಹಾಕುವಂತಹ ಕಟು ಚಳಿಗಾಳಿ ಬೀಸುತ್ತಿತ್ತು.

ಮಗುವು ಸ್ವಲ್ಪ ಸಮಯಕ್ಕೆ ಕಣ್ಣು ಮುಚ್ಚಿ ನಿದ್ರಿಸಲು, ಮುದುಕನು ಚಳಿಯಲ್ಲಿ ನಡುಗುವುದನ್ನು ನೋಡಿದ ಆ ತಾಯಿ, ಎದ್ದು ಅವನಿಗೆಂದು ಒಂದು ಚಿಕ್ಕ ವಾಟಿಯಲ್ಲಿ ಬಿಯರನ್ನು ಹೊಯ್ದು, ಬಿಸಿ ಮಾಡಲು ಒಲೆಯ ಮೇಲಿಟ್ಟಳು. ಮುದುಕನು ಮಗುವಿನ ತೊಟ್ಟಿಲ ಬಳಿ ಕುಳಿತು ಅದನ್ನು ಮೆಲ್ಲನೆ ಆಡಿಸಿದನು. ಆ ತಾಯಿ ಅವನ ಬಳಿಯಲ್ಲಿದ್ದ ಕುರ್ಚಿಯ ಮೇಲೆ ಕುಳಿತು, ಇನ್ನೂ ದೀರ್ಘ ಉಸಿರೆಳೆಯುತ್ತಿದ್ದ ಮಗುವನ್ನು ನೋಡುತ್ತ, ಅದರ ಪುಟ್ಟ ಕೈಯನ್ನು ಹಿಡಿದುಕೊಂಡಳು.

"ನಾನು ಇವನನ್ನು ಉಳಿಸಿಕೊಳ್ಳುವೆನು ಎಂದು ನಿಮಗನಿಸುತ್ತದೆಯಲ್ವೆ?" ಅವಳು ಕೇಳಿದಳು. "ನಿಜಕ್ಕೂ ನಮ್ಮ ದೇವರು ಇವನನ್ನು ನನ್ನಿಂದ ಕಸಿದುಕೊಳ್ಳುವುದಿಲ್ಲ!"

ಆ ಮುದುಕನು--ನಿಜದಲ್ಲಿ ಸ್ವತಃ ತಾನೇ ಸಾವು ಆಗಿದ್ದು, ತನ್ನ ತಲೆಯನ್ನು ಹೌದು ಅಥವಾ ಇಲ್ಲ - ಎಂದು ಯಾವುದೇ ರೀತಿಯಲ್ಲಿ ಅರ್ಥೈಸಿಕೊಳ್ಳಬಹುದಾದ ವಿಚಿತ್ರ ಶೈಲಿಯಲ್ಲಿ ಆಡಿಸಿದನು. ಆ ತಾಯಿ ತನ್ನ ತಲೆಯನ್ನು ಬಗ್ಗಿಸಿ, ತನ್ನ ಮಡಿಲನ್ನು ನೋಡಿದಳು. ಅವಳ ಕೆನ್ನೆಗಳ ಮೇಲೆ ಕಂಬನಿ ಹರಿಯಿತು. ಮೂರು ದಿನ ಮತ್ತು ಮೂರು ರಾತ್ರಿಗಳಿಂದ ಅವಳು ನಿದ್ರೆ ಮಾಡದ ಕಾರಣ, ಅವಳ ತಲೆ ಬಹಳ ಭಾರವಾಗಿ ಕೇವಲ ಒಂದು ನಿಮಿಷಕ್ಕೆ ನಿದ್ರೆ ಹೋದಳು.

ಚಳಿಯಿಂದ ನಡುಗುತ್ತ ಎಚ್ಚರಗೊಂಡ ಅವಳು, "ಏನಿದು?" ಎಂದೇಳುತ್ತಾ ಕೋಣೆಯ ಸುತ್ತಮುತ್ತ ನೋಡಿದಳು. ಆ ಮುದುಕನು ಮನೆಯಲ್ಲಿ ಇರಲಿಲ್ಲ, ಹೊರಟುಹೋಗಿದ್ದನು ಹಾಗೂ ಅವಳ ಮಗು----ಅದು ಕೂಡ ಕಾಣೆಯಾಗಿತ್ತು-ಆ ಮುದುಕನು ಮಗುವನ್ನು ತನ್ನೊಂದಿಗೆ ಎತ್ತೊಯ್ದಿದ್ದನು. ಕೋಣೆಯ ಮೂಲೆಯಲ್ಲಿದ್ದ ಗಡಿಯಾರವು ಬಡಿಯಿತು. ಅದರ ಭಾರ-ಸರಪಳಿಯು ಕಳಚಿಕ್ಕೊಳ್ಳಲು, ಭಾರವಾದ ಆ ಗಡಿಯಾರವು ನೆಲದ ಮೇಲೆ ಬಿದ್ದಿತು, ದಢ್! ನಂತರ ಗಡಿಯಾರವೂ ನಿಂತು ಹೋಯಿತು.

ಆದರೆ ಆ ಬಡಪಾಯಿ ತಾಯಿ ಮನೆಯಿಂದ ಹೊರಗೆ ಓಡಿಬಂದು ತನ್ನ ಮಗುವಿಗಾಗಿ ಜೋರಾಗಿ ಅಳಲಾರಂಭಿಸಿದಳು.

ಹೊರಗೆ ಹಿಮದಲ್ಲಿ, ನೀಳವಾದ ಕಪ್ಪು ವಸ್ತ್ರಗಳನ್ನು ಧರಿಸಿದ ಒಬ್ಬ ಹೆಂಗಸು ಕುಳಿತಿದ್ದಳು ಮತ್ತು ಅವಳು ಆ ತಾಯಿಯನ್ನು ನೋಡಿ ಹೇಳಿದಳು, "ಸಾವು ನಿನ್ನೊಂದಿಗೆ ನಿನ್ನ ಮನೆಯಲ್ಲಿತ್ತು. ಅವನು ನಿನ್ನ ಮಗುವನ್ನು ಬಿರುಸಾಗಿ ಎತ್ತೊಯ್ಯುವುದನ್ನು ನಾನು ನೋಡಿದೆ. ಅವನು ಗಾಳಿಗಿಂತ ವೇಗವಾಗಿ ಚಲಿಸುತ್ತಾನೆ ಮತ್ತು ಅವನು ತನ್ನೊಂದಿಗೆ ತೆಗೆದುಕೊಂಡು ಹೋಗುವುದನ್ನು ತಿರುಗಿ ತರುವುದಿಲ್ಲ!"

"ಓ, ಅವನು ಯಾವ ಮಾರ್ಗದಲ್ಲಿ ಹೋದನೆಂದು ಮಾತ್ರ ನನಗೆ ಹೇಳು!" ತಾಯಿಯು ಕೇಳಿದಳು. "ಅವನು ಹೋದ ದಾರಿಯನ್ನು ಮಾತ್ರ ನನಗೆ ತಿಳಿಸು, ನಾನು ಅವನನ್ನು ಹುಡುಕಿಕೊಳ್ಳುತ್ತೇನೆ!"

“ನನಗೆ ಆ ದಾರಿ ಗೊತ್ತಿದೆ!” ಕಪ್ಪು ವಸ್ತ್ರಗಳಲ್ಲಿದ್ದ ಆ ಹೆಂಗಸು ಹೇಳಿದಳು, "ಆದರೆ ನಾನದನ್ನು ಹೇಳುವ ಮುನ್ನ, ಮೊದಲು ನೀನು ನನಗಾಗಿ, ನಿನ್ನ ಮಗುವಿಗೆ ಹಾಡುತ್ತಿದ್ದ ಎಲ್ಲಾ ಹಾಡುಗಳನ್ನು ಹಾಡು! ನನಗೆ ಆ ಹಾಡುಗಳೆಂದರೆ ಬಹಳ ಇಷ್ಟ. ಈ ಮುಂಚೆಯೇ ಅವುಗಳನ್ನು ಕೇಳಿದ್ದೇನೆ; ನಾನು ’ರಾತ್ರಿ’; ನೀನಾಡುವಾಗ ನಿನ್ನ ಕಣ್ಣುಗಳಿಂದ ಕಂಬನಿ ಸುರಿಯುವುದನ್ನೂ ನಾನು ನೋಡಿದ್ದೇನೆ!”

"ನಾನು ನಿನಗಾಗಿ ಎಲ್ಲಾ, ಎಲ್ಲಾ ಹಾಡುಗಳನ್ನು ಹಾಡುತ್ತೇನೆ!" ತಾಯಿ ಹೇಳಿದಳು, "ಆದರೆ ದಯವಿಟ್ಟು ನೀನೀಗ ನನ್ನನ್ನು ತಡೆಯಬೇಡ ---- ನಾನು ಅವನನ್ನು ಹಿಮ್ಮೆಟ್ಟಿ----ನನ್ನ ಮಗುವನ್ನು ಪಡೆದುಕೊಳ್ಳಬೇಕಾಗಿದೆ!"

ಆದರೆ ರಾತ್ರಿ ಮೌನವಾಗಿ ಕಲ್ಲಂತೆ ಕುಳಿತಳು. ನಂತರ ಆ ತಾಯಿ ಅಳುತ್ತಾ, ತನ್ನ ಕೈಗಳನ್ನು ಹಿಂಡುತ್ತಾ ಹಾಡತೊಡಗಿದಳು, ಅನೇಕ ಹಾಡುಗಳನ್ನು ಹಾಡಿದಳು ಮತ್ತು ಅವಳ ಕಂಬನಿ ಅದಕ್ಕಿಂತ ಹೆಚ್ಚಾಗಿತ್ತು; ನಂತರ ರಾತ್ರಿ ಹೇಳಿದಳು, "ಬಲಕ್ಕೆ, ದಟ್ಟನೆಯ ದೇವದಾರು ಮರಗಳ ಕಾಡಿನೊಳಗೆ ಹೋಗು, ಸಾವು ನಿನ್ನ ಪುಟ್ಟ ಮಗುವಿನೊಂದಿಗೆ ಆ ಮಾರ್ಗದಲ್ಲಿ ಹೋಗುವುದನ್ನು ನಾನು ನೋಡಿದೆ!"

ಕಾಡಿನೊಳಗೆ ರಸ್ತೆಯು ಎರಡಾಗಿ ವಿಂಗಡಗೊಂಡ ಸ್ಥಳಕ್ಕೆ ಬಂದು ಸೇರಿದ ಆ ತಾಯಿಗೆ, ಅಲ್ಲಿಂದ ಮುಂದಕ್ಕೆ ಯಾವಕಡೆಗೆ ತಿರುವು ತೆಗೆದುಕೊಳ್ಳಬೇಕೆಂದು ತಿಳಿಯಲಿಲ್ಲ. ಅಲ್ಲಿಯೇ ಪಕ್ಕದಲ್ಲಿ ಒಂದು ಮುಳ್ಳಿನ ಪೊದರುಗಿಡವಿತ್ತು. ಚಳಿಗಾಲವಾಗಿದ್ದುದರಿಂದ ಅದಕ್ಕೆ ಎಲೆಗಳೂ ಇರಲಿಲ್ಲ, ಹೂವೂ ಇರಲಿಲ್ಲ ಮತ್ತು ಅದರ ಕೊಂಬೆಗಳಲ್ಲಿ ಬರ್ಫಿನ ತುಂಡುಗಳು ತೂಗುತ್ತಲಿತ್ತು.

"ಸಾವು ನನ್ನ ಪುಟ್ಟ ಮಗುವಿನೊಂದಿಗೆ ಈ ಮಾರ್ಗದಲ್ಲಿ ಹೋಗುವುದನ್ನು ನೀನು ನೋಡಿದೆಯಾ?" ತಾಯಿಯು ಕೇಳಿದಳು.

"ಹೌದು," ಉತ್ತರ ನೀಡಿತು ಮುಳ್ಳಿನ ಗಿಡ; "ನಾನು ಚಳಿಯಿಂದ ಮಂಜುಗಡ್ಡೆಯಾಗಿ ಸಾಯುವಂತಾಗಿದ್ದೇನೆ. ನೀನು ನನ್ನನ್ನು ಎದೆಗಪ್ಪಿ ಬೆಚ್ಚಗಾಗಿಸುವವರೆಗೆ, ಅವನು ಯಾವ ದಾರಿಯಲ್ಲಿ ಹೋದನೆಂದು ನಾನು ನಿನಗೆ ಹೇಳಲಾರೆ.”

ಆಗ ಅವಳು ಆ ಮುಳ್ಳುಗಿಡವನ್ನು ಅದಕ್ಕೆ ಬೆಚ್ಚಗಾಗುವಂತೆ ತನ್ನೆದೆಗೆ ಗಟ್ಟಿಯಾಗಿ ಅಪ್ಪಿಕೊಂಡಳು. ಗಿಡದಲ್ಲಿದ್ದ ಮುಳ್ಳು ಅವಳನ್ನು ಚುಚ್ಚಿ, ಅವಳ ಮಾಂಸವನ್ನು ಸೀಳಿತು. ಅಧಿಕ ರಕ್ತವು ಸುರಿಯಿತು. ಆದರೆ ಆ ಮುಳ್ಳು ಗಿಡದಿಂದ ಹಸಿರೆಳೆಗಳು ಚಿಗುರಿದವು ಮತ್ತು ಅದರಿಂದ ಆ ಚಳಿಯಾದ ರತ್ರಿಯಲ್ಲಿ ಹೂವುಗಳು ಅರಳಿದವು. ಅದನ್ನು ನೋಡಿದ ಆ ದುಃಖತಪ್ತ ತಾಯಿಯ ಹೃದಯವೂ ಬೆಚ್ಚಗಾಯ್ತು. ನಂತರ ಅವಳು ಹೋಗಬೇಕಾದ ದಾರಿಯನ್ನು ಆ ಮುಳ್ಳಿನ ಪೊದರುಗಿಡ ಅವಳಿಗೆ ತಿಳಿಸಿತು.

ನಂತರ ಅವಳು ಒಂದು ದೊಡ್ಡ ಕೆರೆಯ ಬಳಿ ಬಂದಳು. ಅದರ ದಡದಲ್ಲಿ ಯಾವ ಹಡಗೋ ಅಥವಾ ದೊಣಿಯೋ ಕಾಣಿಸಲಿಲ್ಲ. ಅವಳು ನಡೆದು ಹೋಗಲು ಸಾಧ್ಯವಾಗುವಂತೆ ಅದು ಚಳಿಗೆ ಗಡ್ಡೆಯಾಗಿರಲೂ ಇಲ್ಲ ಹಾಗು ಅವಳದನ್ನು ದಾಟಿ ಹೋಗಲು ಸಾಧ್ಯವಾಗುವಂತೆ ಅದು ತೆರೆದ ನೀರಾಗಿಯೂ ಇರಲಿಲ್ಲ. ಆದರೂ ಅವಳ ಮಗುವನ್ನು ಕಂಡು ಹಿಡುಯಬೇಕೆಂದರೆ, ಅವಳು ಕೆರೆಯನ್ನು ದಾಟಲೇ ಬೇಕಿತ್ತು. ಆಗ ಅವಳು ಕುಳಿತು ಕೆರೆಯ ನೀರನ್ನೆಲ್ಲಾ ಕುಡಿದು ಬಿಡಲು ಪ್ರಯತ್ನಿಸಿದಳು. ಒಬ್ಬ ಮಾನವನಿಂದ ಅದು ಹೇಗೆ ಸಾಧ್ಯವಾದೀತು? ಆದರೆ ದುಃಖದಿಂದ ತುಂಬಿದ್ದ ಆ ತಾಯಿ ಯಾವುದಾದರೊಂದು ಚಮತ್ಕಾರವಾಗಬಹುದೆಂದೆನಿಸಿದಳು.

"ನಿನ್ನೀ ಪ್ರಯತ್ನದಲ್ಲಿ ಖಂಡಿತ ನೀನು ಜಯಗಳಿಸುವುದಿಲ್ಲ," ಕೆರೆಯು ನುಡಿಯಿತು; "ನಾವಿಬ್ಬರು ಒಂದು ಒಪ್ಪಂದ ಮಾಡಿಕೊಳ್ಳೋಣ, ಅದುವೆ ಇಬ್ಬರಿಗೂ ಹಿತಕರವಾಗಿರುತ್ತದೆ. ನನಗೆ ಮುತ್ತುಗಳನ್ನು ಸಂಗ್ರಹಿಸುವುದು ಬಹಳ ಇಷ್ಟ ಮತ್ತು ನಾನೋಡಿರುವುದರಲ್ಲೆ ನಿನ್ನ ಕಣ್ಣುಗಳು ಅತ್ಯಂತ ಶುಭ್ರವಾಗಿವೆ. ನೀನು ಕಣ್ಣೀರಿಟ್ಟು ನಿನ್ನ ಕಣ್ಣುಗಳನ್ನು ಉದುರಿಸುವೆಯೆಂದರೆ, ನಾನು ಅವುಗಳನ್ನು ತೆಗೆದುಕೊಂಡು ನಿನ್ನನ್ನು ಸಾವು ವಾಸವಾಗಿರುವ ಆ ದೊಡ್ಡ ಹಸಿರುಮನೆಗೆ ಕರೆದೊಯ್ಯುವೆನು. ಅಲ್ಲಿ ಅವನು ಹೂಗಿಡಗಳು ಮತ್ತು ಮರಗಳನ್ನು ಬೆಳೆಸುತ್ತಿದ್ದಾನೆ. ಪ್ರತಿಯೊಂದು ಗಿಡ ಮತ್ತು ಮರವೂ ಮನುಷ್ಯ ಜೀವವೇ ಆಗಿರುತ್ತದೆ.”

"ಓ! ನನ್ನ ಮಗುವಿಗಾಗಿ ನಾನು ಏನನ್ನು ತಾನೇ ಕೊಡಲಾರೆ ಎನ್ನುವೆ!" ಅಳುತ್ತಿದ್ದ ತಾಯಿ ಹೇಳಿದಳು, ಮತ್ತವಳು ಇನ್ನೂ ಹೆಚ್ಚಾಗಿ ಅಳುತ್ತಿದ್ದಂತೆ ಅವಳ ಕಣ್ಣುಗಳು ಕೆರೆಯೊಳಗೆ ಬಿದ್ದು, ಆಳದಲ್ಲಿ ಮುಳುಗಲು, ಅವು ಎರಡು ಅಮೂಲ್ಯ ಮುತ್ತುಗಳಾದವು. ಆಮೇಲೆ ಕೆರೆಯು ಅವಳನ್ನು ತನ್ನ ಅಬ್ಬರಿಸುವ ಅಲೆಗಳಿಂದೆತ್ತಿ ಉಯ್ಯಾಲೆಯಲ್ಲಿಟ್ಟು ಬೀಸುವಂತೆ ಆಚೆದಡಕ್ಕೆ ಎಸೆಯಿತು. ಅಲ್ಲಿ ಒಂದು ಅದ್ಭುತವಾದ ಬಹಳ ಮೈಲಿಗಳಷ್ಟು ವಿಸ್ತಾರವಾದ ಕಟ್ಟಡವಿತ್ತು. ಅದು ಕಾಡುಗಳು ಮತ್ತು ಗುಹೆಗಳಿಂದ ಮುಚ್ಚಲ್ಪಟ್ಟ ಬೆಟ್ಟವೋ ಅಥವಾ ಅದೊಂದು ಕಟ್ಟಡವೋ ಎಂದು ಯಾರಿಂದಲೂ ಊಹಿಸಲಾಗದಂತಿತ್ತು. ಆದರೆ ಅವುಗಳೆಲ್ಲ ಆ ಬಡಪಾಯಿ ತಾಯಿಗೆ ಹೇಗೆ ಕಾಣಿಸುವುದು, ಅವಳು ಅತ್ತು ಅತ್ತು ತನ್ನ ಕಣ್ಣುಗಳನ್ನು ಕೆರೆಗೆ ಸುರಿದಿದ್ದಳಲ್ಲ.

"ನನ್ನ ಮಗುವನ್ನು ತೆಗೆದೊಯ್ದ ಸಾವನ್ನು ನಾನೆಲ್ಲಿ ಕಂಡು ಹಿಡಿಯುವೆ?” ಅವಳು ಕೇಳಿದಳು.

"ಅವನಿನ್ನು ಇಲ್ಲಿಗೆ ಬಂದಿಲ್ಲ!" ಸಾವಿನ ಆ ದೊಡ್ಡ ಹಸಿರುಮನೆಯನ್ನು ನೋಡಿಕೊಳ್ಳುವುದಕ್ಕೆ ನೇಮಿಸಲ್ಪಟ್ಟಿದ್ದ ಒಬ್ಬ ಮುದುಕಿಯು ಹೇಳಿದಳು, "ನೀನು ಇಲ್ಲಿಯ ದಾರಿಯನ್ನು ಹೇಗೆ ಕಂಡುಹಿಡಿದೆ?" ನಿನಗೆ ಯಾರು ಸಹಾಯ ಮಾಡಿದರು?"

"ನಮ್ಮ ದೇವರು ನನಗೆ ಸಹಾಯ ಮಾಡಿದನು," ಅವಳು ಉತ್ತರ ಕೊಟ್ಟಳು "ಆತನು ಕರುಣಾಮಯಿಯಾಗಿದ್ದಾನೆ ಹಾಗೂ ನೀನು ಕೂಡ ಕರುಣೆಯುಳ್ಳವಳಾಗಿರುವೆ! ನಾನು ನನ್ನ ಮಗುವನ್ನೆಲ್ಲಿ ಕಾಣಬಹುದು?"

"ಇಲ್ಲ, ನನಗೆ ಗೊತ್ತಿಲ್ಲ," ಮುದುಕಿಯು ನುಡಿದಳು "ಮತ್ತು ನಿನಗೆ ಕಣ್ಣು ಕಾಣುವುದಿಲ್ಲ! ಅನೇಕ ಹೂಗಳು ಹಾಗು ಮರಗಳು ಈ ರಾತ್ರಿ ಬಾಡಿಹೋಗಿವೆ, ಶೀಘ್ರವೇ ಸಾವು ಬಂದು ಅವುಗಳನ್ನು ಬದಲಾಯಿಸುತ್ತಾನೆ! ಪ್ರತಿಯೊಬ್ಬ ಮಾನವನಿಗೆ ಒಂದು ಜೀವ ವೃಕ್ಷ ಅಥವ ಜೀವ ಹೂವು ಇರುತ್ತದೆಯೆಂದು ನೀನು ಬಲ್ಲೆ. ಅವು ಅವರಿಗಾಗಿ ಪ್ರತ್ಯೇಕಿಸಲ್ಪಟ್ಟಿರುತ್ತದೆ. ನೋಡಲಿಕ್ಕೆ ಸಾಧಾರಣ ಗಿಡಗಳಂತೆಯೆ ಕಂಡರೂ ಅವುಗಳಿಗೆ ತಮ್ಮದೇ ಆದ ಹೃದಯ ಬಡಿತವಿರುತ್ತದೆ. ಮಕ್ಕಳ ಹೃದಯವೂ ಬಡಿಯುತ್ತಿರುತ್ತದೆ. ಅವುಗಳನ್ನು ನೀನು ಗಮನಿಸಿದರೆ ಬಹುಶ: ನೀನು ನಿನ್ನ ಮಗುವಿನದ್ದನ್ನು ಗುರುತಿಸಬಹುದು. ಇನ್ನು ಹೆಚ್ಚಾಗಿ ಏನೇನು ಮಾಡಬೇಕೆಂದು ನಾನು ನಿನಗೆ ಹೇಳುವೆ, ಆದರೆ ಬದಲಿಗೆ ನೀನು ನನಗೆ ಏನು ಕೊಡುವೆ?"

"ನನ್ನ ಬಳಿ ನಿನಗೆ ಕೊಡಲು ಏನೂ ಇಲ್ಲ," ದುಃಖಭರಿತ ಆ ತಾಯಿ ನುಡಿದಳು, "ಆದರೆ ನಿನಗಾಗಿ ನಾನು ಭೂಮಿಯ ಕಡೆಯ ತನಕ ಹೋಗಬಲ್ಲೆ!"

"ಅಲ್ಲಿ ನನಗೆ ಆಗಬೇಕಾದದ್ದೇನೂ ಇಲ್ಲ!" ಮುದುಕಿ ನುಡಿದಳು. "ಆದರೆ ನೀನು ನನಗೆ ನಿನ್ನ ಉದ್ದನೆಯ ಕಪ್ಪು ಕೂದಲನ್ನು ನೀಡಬಲ್ಲೆ. ನಿನಗೆ ಗೊತ್ತಿರುವಂತೆ ಅದು ಬಹಳ ಸುಂದರವಾಗಿದೆ ಹಾಗೂ ನನಗೆ ಇಷ್ಟವಾಗಿದೆ! ಅದಕ್ಕೆ ಬದಲಾಗಿ ನನ್ನ ಬಿಳಿ ಕೂದಲನ್ನು ನೀನು ತೆಗೆದುಕೊಳ್ಳಬಹುದು.”

"ಇದನ್ನು ಬಿಟ್ಟು ಬೇರೇನ್ನನ್ನಾದರೂ ಕೇಳುವೆಯಾ?" ಅವಳು ಹೇಳಿದಳು "ನಾನದನ್ನೂ ಸಂತೋಷದಿಂದ ನಿನಗೆ ನೀಡುವೆ!" ಎಂದು ಹೇಳಿ ಅವಳು ತನ್ನ ಸುಂದರವಾದ ಕಪ್ಪು ಕೂದಲನ್ನು ಕೊಟ್ಟು ಬದಲಿಗೆ ಮುದುಕಿಯ ಬಿಳಿ ಕೂದಲನ್ನು ಪಡೆದುಕೊಂಡಳು.

ಆಮೇಲೆ ಅವರಿಬ್ಬರು ಗಿಡಗಳೂ, ಮರಗಳೂ ಬಹಳ ಅದ್ಭುತ ಸಮಾಗಮದಲ್ಲಿ ಬೆಳೆದಿದ್ದ ಸಾವಿನ ದೊಡ್ಡ ಹಸಿರು ಮನೆಯೊಳಗೆ ಹೋದರು. ಅಲ್ಲಿ ಕೊಳವಿಯೊಳಗೆ ಸೊಗಸಾಗಿ ಅರಳುತ್ತಿರುವ ಹಾಯ್ಸಿಂಥ್ ಪುಷ್ಪಗಳು ಹಾಗು ಬಲಿಷ್ಟ ಕಾಂಡದೊಂದಿಗೆ ಮರಗಳಂತೆ ಬೆಳೆದುನಿಂತ ಪ್ಯೂನಿ ಸಸ್ಯಗಳಿದ್ದವು. ಅಲ್ಲಿ ಜಲಸಸ್ಯಗಳು ಇದ್ದವು. ಅವುಗಳಲ್ಲಿ ಕೆಲವು ತಾಜಾವಾಗಿ ಇದ್ದವು, ಕೆಲವು ನೋಡಲಿಕ್ಕೆ ಸ್ವಲ್ಪ ಬಡಕಲಾಗಿ ಕಂಡವು. ಅವುಗಳನ್ನು ನೀರಹಾವುಗಳು ಸುತ್ತಿಕೊಂಡಿದ್ದವು ಮತ್ತು ಅವುಗಳ ದಂಡನ್ನು ಕಪ್ಪು ಚೇಳುಗಳು ಕಚ್ಚಿಕೊಂಡಿದ್ದವು. ಅದನ್ನು ದಾಟಿ ಹೋದಾಗ ಅಲ್ಲಿ ಕೆಲವು ಉನ್ನತವಾದ ತಾಳೆ, ಓಕ್ ಮತ್ತು ಬಾಳೆ ಮರಗಳು ಎತ್ತರವಾಗಿ ಬೆಳೆದು ನಿಂತಿರಲು, ಅವುಗಳ ಬಳಿ ಪಾರ್ಸ್ಲಿ ಮತ್ತು ಅರಳುತ್ತಿದ್ದ ಥೈಮ್ ಗಿಡಗಳು ನಳನಳಿಸುತ್ತಿದ್ದವು. ಪ್ರತಿಯೊಂದು ಗಿಡ ಮತ್ತು ಹೂಗಳಿಗೂ ಪ್ರತ್ಯೇಕ ಹೆಸರಿತ್ತು, ಪ್ರತಿಯೊಂದೂ ಒಂದೊಂದು ಮನುಷ್ಯ ಜೀವವನ್ನು ಪ್ರತಿನಿಧಿಸುತ್ತಿತ್ತು ಹಾಗೂ ಅವು ಇನ್ನೂ ಬದುಕ್ಕಿದ್ದವರಿಗೆ ಸೇರಿದ್ದವಾಗಿದ್ದವು--ಚೀನಾದಲ್ಲಿ ಕೆಲವರು, ಗ್ರೀನ್‍ಲ್ಯಾಂಡಿನಲ್ಲಿ ಇನ್ನೂ ಕೆಲವರು--ಭೂಮಿಯ ಎಲ್ಲಾ ಭಾಗಗಳಲ್ಲೂ ಇರುವವರನ್ನು ಅವು ಪ್ರತಿನಿಧಿಸುತ್ತಿದ್ದವು. ಕೆಲವು ದೊಡ್ಡ ಮರಗಳು ಚಿಕ್ಕ ಮಡಿಕೆಗಳಲ್ಲಿಡಲ್ಪಟ್ಟಿದ್ದು, ಅವು ಮಡಿಕೆಗಳನ್ನು ಚೂರು ಚೂರಾಗಿ ಒಡೆದುಕೊಂಡು ಬೆಳೆಯುವಂತಿದ್ದವು. ಅದೇ ಸಮಯದಲ್ಲಿ ಅನೇಕ ಬಲಹೀನವಾದ ಹೂಗಳು ಫಲವತ್ತಾದ ಮಣ್ಣಲ್ಲಿ ಬೆಳೆಯುತ್ತಿದ್ದವು. ಅವುಗಳ ಸುತ್ತ ಪಾಚಿಗಳು ಸುತ್ತಿಕೊಂಡಿರಲು ಅವುಗಳನ್ನು ಬಹು ಜಾಗರೂಕತೆಯಿಂದ ಬೆಳೆಸಿ ಕಾಯಲ್ಪಡಲಾಗಿತ್ತು. ವ್ಯಥೆಯಲ್ಲಿದ್ದ ಆ ತಾಯಿ ಎಲ್ಲಾ ಪುಟ್ಟ ಗಿಡಗಳ ಬಳಿ ಬಗ್ಗಿ ಆಲಿಸಲು, ಪ್ರತಿಯೊಂದು ಹೂಗಳಲ್ಲು ಮಾನವ ಹೃದಯ ಬಡಿತವು ಕೇಳಿಸಿತು. ಕೊನೆಗೂ ಆ ಲಕ್ಷ ಲಕ್ಷ ಹೃದಯ ಬಡಿತಗಳಲ್ಲಿ ತನ್ನ ಮಗುವಿನ ಹೃದಯ ಬಡಿತವನ್ನು ಆಕೆ ಗುರುತಿಸಿದಳು.

"ಇದೇ ಅದು!" ತನ್ನ ಅನಾರೋಗ್ಯ ತಲೆಯನ್ನು ಕೆಳಗೆ ಬಾಗಿದ್ದ ಒಂದು ಕೇಸರಿ ಹೂವ ಕಡೆಗೆ ತನ್ನ ಕರಗಳನ್ನು ತೋರಿ, ಅವಳು ಜೋರಾಗಿ ಕೂಗಿ ಹೇಳಿದಳು.

"ಹೂವನ್ನು ಮುಟ್ಟಬೇಡ!" ಆ ಮುದುಕಿ ಉದ್ಗರಿಸಿದಳು. "ಆದರೆ ನೀನು ಇಲ್ಲೇ ಇದ್ದು, ಸಾವು ಬಂದ ಕೂಡಲೆ - ಅವನಿನ್ನೇನು ಬಂದುಬಿಡುವನು ಎಂದೆನಗನಿಸುತ್ತದೆ - ನೀನು ಅವನನ್ನು ಹೂವನ್ನು ಕೀಳಲು ಬಿಡಬೇಡ. ಆದರೆ ಅವನು ಹಾಗೆ ಮಾಡಿದರೆ, ನೀನು ಕೂಡ ಅದೇ ರೀತಿ ಮತ್ತೆಲ್ಲಾ ಗಿಡಗಳಿಗೆ ಮಾಡುವದಾಗಿ ಅವನನ್ನು ಬೆದರಿಸು. ಇದರಿಂದ ಅವನಿಗೆ ಭಯವುಂಟಾಗುತ್ತದೆ! ಯಾಕೆಂದರೆ ಅವನು ನಮ್ಮ ದೇವರಿಗೆ ಪ್ರತಿಯೋಂದು ಗಿಡದ ಬಗ್ಗೆಯೂ ಲೆಕ್ಕ ಕೊಡಬೇಕು. ಯಾವುದೇ ಒಂದು ಗಿಡವೂ ಆತನ ಅನುಮತಿಯಿಲ್ಲದೆ ಕೀಳಲಾಗುವುದಿಲ್ಲ.

ಆ ಹೊತ್ತು ಆ ದೊಡ್ಡ ಆವರಣದಿಂದ ಒಂದು ಹಿಬ್ಬನಿಯ ತಣ್ಣನೆಯ ಚಳಿಯು ಮುನ್ನುಗ್ಗಿ ಪ್ರವೇಶಿಸಿತು. ಸಾವು ಬಂದನೆಂದು ಆ ಕುರುಡು ತಾಯಿಗೆ ಅರ್ಥವಾಯಿತು.

"ನಿನಗೇಗೆ ಇಲ್ಲಿನ ದಾರಿ ಗೊತ್ತಾಯಿತು?" ಅವನು ಕೇಳಿದನು, "ನೀನು ಹೇಗೆ ನನಗಿಂತ ಮುಂಚೆ ಇಲ್ಲಿಗೆ ಬಂದೆ?"

"ನಾನೊಬ್ಬ ತಾಯಿ," ಅವಳು ಉತ್ತರಿಸಿದಳು.

ಆ ನಾಜೂಕಾದ ಪುಟ್ಟ ಹೂವಿನ ಕಡೆಗೆ ಸಾವು ತನ್ನ ದೊಡ್ಡ ಕೈಗಳನ್ನು ಚಾಚಲು, ಆ ತಾಯಿ ಅದರ ಸುತ್ತ ತನ್ನ ಕೈಗಳನ್ನು ಗಟ್ಟಿಯಾಗಿ ಹಿಡಿದಳು, ಅದೇ ಸಮಯದಲ್ಲಿ ಅದರ ಒಂದು ಎಲೆಯನ್ನಾದರು ತಾನೆಲ್ಲಿ ಮುಟ್ಟಿಬಿಡುವೆನೋವೆಂದು ಅವಳಿಗೆ ಭಯವುಂಟಾಯಿತು. ಆಗ ಸಾವು ಅವಳ ಕೈಗಳ ಮೇಲೆ ಜೋರಾಗಿ ಊದಲು, ಅವನ ಉಸಿರು ಅವಳಿಗೆ ಕಟು ಚಳಿಗಾಲದ ಗಾಳಿಗಿಂತಲೂ ತಣ್ಣಗೆ ಚುಚ್ಚಿತು, ಮತ್ತು ಅವಳ ಕೈಗಳು ಬಲಹೀನವಾಗಿ ಕೆಳೆಕ್ಕೆ ಬಿದ್ದಿತು.

" ನನಗೆದುರಾಗಿ ನಿನ್ನಿಂದ ಏನ್ನನ್ನು ಮಾಡಲಾಗುವುದಿಲ್ಲ!" ಸಾವು ಹೇಳಿತು.

"ಆದರೆ ನಮ್ಮ ಆ ದೇವರಿಂದ ಸಾಧ್ಯವಾಗುತ್ತದೆ!" ಆಕೆ ಹೇಳಿದಳು.

"ಆತನ ಆಜ್ಞೆಯನ್ನೇ ನಾನು ಪಾಲಿಸುತ್ತಿರುವುದು!" ಸಾವು ಉತ್ತರಿಸಿತು. "ನಾನು ಅವನ ತೋಟಗಾರನು. ನಾನು ಎಲ್ಲಾ ಹೂಗಳು ಮತ್ತು ಮರಗಳನ್ನು ತೆಗೆದು ಪರದೈಸಿಯಲ್ಲಿರುವ ಅಙ್ಞಾತ ಭೂಮಿಯಲ್ಲಿನ ದೊಡ್ಡ ತೋಟದಲ್ಲಿ ಪುನಃ ನಡುತ್ತೇನೆ. ಅದು ಅಲ್ಲಿ ಹೇಗೆ ಬೆಳೆಯುತ್ತದೆ ಮತ್ತು ಆ ತೋಟ ಹೇಗಿರುತ್ತದೆಯೆಂದು ನಾನು ನಿನಗೆ ಹೇಳಲಾಗುವುದಿಲ್ಲ.

"ನನ್ನ ಮಗುವನ್ನು ನನಗೆ ತಿರುಗಿ ಕೊಡು!" ಅಳುತ್ತಾ, ಕೂಗಾಡುತ್ತಾ ಆ ತಾಯಿ ಗೋಗರೆದಳು. ಹಾಗು ದಿಢೀರನೆ ತನ್ನ ಬಳಿಯಲ್ಲಿದ್ದ ಎರಡು ಹೂಗಳನ್ನು ತನ್ನ ಕೈಯಲ್ಲಿ ತೆಗೆದುಕೊಂಡು, ಸಾವನ್ನು ನೋಡಿ ಕೂಗಾಡುತ್ತಾ ಹೇಳಿದಳು, "ನಾನು ಹತಾಶಳಾಗಿರುವುದರಿಂದ ನಿನ್ನ ಎಲ್ಲಾ ಹೂಗಳನ್ನು ಹಾಳು ಮಾಡಿಬಿಡುತ್ತೇನೆ."

"ಅವುಗಳನ್ನು ಮುಟ್ಟಬೇಡ!" ಸಾವು ನುಡಿಯಿತು " ನೀನು ಬಹಳ ವ್ಯಥೆಯಲ್ಲಿರುವೆಯೆಂದು ನೀನೇಳುವೆ, ಹಾಗಿರುವಾಗ ನೀನು ಮತ್ತೊಬ್ಬ ತಾಯಿಯನ್ನು ನಿನ್ನಂತೆಯೆ ದುಃಖಕ್ಕೊಳಗಾಗುವಂತೆ ಮಾಡುವೆಯಾ?”

"ಮತ್ತೊಬ್ಬ ತಾಯಿ!" ಹೂಗಳನ್ನು ತನ್ನ ಕೈಗಳಿಂದ ಬಿಡಿಸುತ್ತ, ಆ ಬಡಪಾಯಿ ಹೆಂಗಸು ಹೇಳಿದಳು.

"ಇಗೋ, ನಿನ್ನ ಕಣ್ಣುಗಳು," ಹೇಳಿತು ಸಾವು "ನಾನು ಅವುಗಳನ್ನು ಕೊಳದಿಂದ ಹಿಡಿದು ತಂದಿರುವೆ, ಅವುಗಳು ಬಹಳ ಪ್ರಕಾಶವಾಗಿ ಹೊಳೆಯುತ್ತಿದ್ದವು; ಆದರೆ ಅವು ನಿನ್ನವೆಯೆಂದು ನನಗೆ ತಿಳಿದಿರಲಿಲ್ಲ. ಇವುಗಳನ್ನು ನೀನು ಮತ್ತೆ ಪಡೆದುಕೊ, ಈಗ ಅವು ಮೊದಲಿಗಿಂತಲೂ ತಿಳಿಯಾಗಿವೆ - ನಿನ್ನ ದೃಷ್ಟಿಯನ್ನು ಪಡೆದುಕೊಂಡು ನಿನ್ನ ಹತ್ತಿರವಿರುವ ಈ ಆಳ ಭಾವಿಯೊಳಗೆ ನೋಡು. ನೀನು ಕೀಳಬೇಕೆಂದಿರುವ ಆ ಎರಡು ಹೂಗಳ ಹೆಸರುಗಳನ್ನು ನಾನು ನಿನಗೆ ಹೇಳುತ್ತೇನೆ. ನೀನು ಇನ್ನೇನು ಕೆಡವಿ ಹಾಳುಮಾಡಬೇಕೆಂದಿರುವ ಆ ಎರಡು ಹೂಗಳು ಪ್ರತಿನಿಧಿಸುವ ಮನುಷ್ಯರ ಇಡೀ ಭವಿಷ್ಯವನ್ನು ---ಅವರ ಇಡೀ ಜೀವನವನ್ನು ನೀನೀಗ ನೋಡುವೆ."

ಆಗ ಅವಳು ಆ ಭಾವಿಯೊಳಗೆ ನೋಡಿದಳು ಮತ್ತು ಅವರಿಬ್ಬರಲ್ಲಿ ಒಬ್ಬನು ಬೆಳೆದು ಹೇಗೆ ಪ್ರಪಂಚಕ್ಕೆ ಆಶೀರ್ವಾದವಾಗಿ ಆದನು ಹಾಗು ಅವನು ಹೇಗೆ ಸಂತೋಷ ಮತ್ತು ಖುಷಿಯನ್ನು ಜಗವೆಲ್ಲಾ ಹಬ್ಬಿದನೆಂದು ನೋಡಲಿಕ್ಕೆ ಬಹಳ ಸಂತಸಕರವಾಗಿತ್ತು. ಆದರೆ ಮತ್ತೊಬ್ಬನ ಬದುಕು ಚಿಂತೆ, ಬಡತನ, ಸಂಕಷ್ಟಗಳು ಮತ್ತು ದುಃಖದಿಂದ ತುಂಬಿರುವುದನ್ನೂ ನೋಡಿದಳು.

"ಎರಡೂ ದೇವರ ಚಿತ್ತವೇ ಆಗಿರುತ್ತದೆ!" ಸಾವು ಹೇಳಿತು.

"ಇವೆರಡರಲ್ಲಿ ಯಾವುದು ದುರದೃಷ್ಟದ ಹೂವು, ಯಾವುದು ಸಂತಸದ ಹೂವು?" ಅವಳು ಕೇಳಿದಳು.

"ನಾನದನ್ನು ನಿನಗೆ ಹೇಳಲಾಗುವುದಿಲ್ಲ," ಸಾವು ಹೇಳಿತು; "ಆದರೆ ಒಂದನ್ನು ತಿಳಿದುಕೊ, ಆ ಎರಡು ಹೂಗಳಲ್ಲಿ ಒಂದು ನಿನ್ನ ಮಗುವನ್ನು ಪ್ರತಿನಿಧಿಸುತ್ತದೆ. ಈಗ ನೀನು ನೋಡಿದ್ದು ನಿನ್ನ ಮಗುವಿನ ವಿಧಿಯನ್ನು - ನಿನ್ನ ಸ್ವಂತ ಮಗುವಿನ ಭವಿಷ್ಯವನ್ನು!"
ಆಗ ಆ ತಾಯಿ ಭಯದಿಂದ ಜೋರಾಗಿ ಚೀರುತ್ತಾ, "ಇದರಲ್ಲಿ ಯಾವುದು ನನ್ನ ಮಗುವಿನದ್ದು? ನನಗೆ ಅದನ್ನು ಹೇಳು? ಮುಗ್ಧ ಮಗುವನ್ನು ಪಾರುಮಾಡು! ಆ ಎಲ್ಲಾ ಸಂಕಷ್ಟದಿಂದ ನನ್ನ ಮಗುವನ್ನು ಪಾರು ಮಾಡು! ಅದನ್ನು ತೆಗೆದುಕೊಂಡೊಯ್ಯುವದು ಒಳಿತು! ಅದನ್ನು ದೇವರ ರಾಜ್ಯಕ್ಕೆ ತೆಗೆದು ಕೊಂಡು ಹೋಗಿಬಿಡು! ನನ್ನ ಕಣ್ಣೀರನ್ನು ಮರೆತುಬಿಡು, ನನ್ನ ಬೇಡಿಕೆಗಳನ್ನು ಮರೆತುಬಿಡು ಮತ್ತು ನಾನು ಮಾಡಿದ್ದನ್ನೆಲ್ಲಾ ಮರೆತುಬಿಡು!

"ನನ್ನಿಂದ ನಿನ್ನನ್ನು ಅರ್ಥಮಾಡಿಕೊಳ್ಳಲಾಗುವುದಿಲ್ಲ!" ಸಾವು ಹೇಳಿತು; "ನಿನಗೆ ನಿನ್ನ ಮಗುವು ವಾಪಸ್ಸು ಬೇಕೆ ಅಥವಾ ನಾನು ಅವನನ್ನು ದೂರ, ನೀನರಿಯದ ಜಾಗಕ್ಕೆ ಒಯ್ಯಲೆ?

ಆಗ ಆ ತಾಯಿ ತನ್ನ ಕೈಗಳನ್ನು ಮುದುರಿಕೊಂಡಳು, ಮೊನಕಾಲೂರಿದಳು, ಹಾಗು ದೇವರಲ್ಲಿ ಪ್ರಾರ್ಥಿಸಿದಳು. "ಓ, ದೇವರೇ, ನನ್ನನ್ನು ಆಲಿಸದಿರು! ಅತ್ಯುತ್ತಮವಾದ, ಅತೀ ಶ್ರೇಷ್ಟವಾದ ನಿನ್ನ ಚಿತ್ತಕ್ಕೆ ವಿರುದ್ಧವಾಗಿ, ನಾನು ಬೇಡುವಾಗ ನನ್ನನ್ನು ಆಲಿಸದಿರು! ನನ್ನನ್ನು ಆಲಿಸದಿರು! "

ಮತ್ತವಳು ತನ್ನ ತಲೆಯನ್ನು ಕೆಳಗೆ ತನ್ನ ಮಡಿಲಿಗೆ ಬಾಗಿದಳು. ಆಗ ಸಾವು ಅವಳ ಮಗುವನ್ನು ತೆಗೆದುಕೊಂಡು ಅಙ್ಞಾತ ಲೋಕಕ್ಕೆ ಒಯ್ಯಿತು.
-----------
Attribution: A translation of "The Story of A Mother" by Hans Christian Andersen

-

Photo by:
Submitted by: Susan
Submitted on: Sat Apr 19 2014 16:33:28 GMT+0530 (IST)
Category: Translation
Language: ಕನ್ನಡ/Kannada


- Read submissions at http://abillionstories.wordpress.com
- Submit a poem, quote, proverb, story, mantra, folklore, article, painting, cartoon, drawing, article in your own language at http://www.abillionstories.com/submit

Comments