ಕವನಗಳನ್ನು ಕಟ್ಟದವರು -Prabhu Iynanda Thu Mar 07 2013 20:07:58 GMT-0800 (PST)

posted Mar 7, 2013, 8:08 PM by A Billion Stories
ದೇಶವು ಸ್ವತಂತ್ರವಾಗುತ್ತಿದ್ದ ಸಂದರ್ಭದಲ್ಲಿ ಅದರ ಪ್ರಗತಿಗೆ ಔದ್ಯೋಗೀಕರಣವಾಗಬೇಕೆಂದು ಜವಾಹರಲಾಲ್ ನೆಹ್ರೂ ಕರೆಕೊಟ್ಟದ್ದರಿಂದ ಉದಿಸಿದ ಕಾರ್ಖಾನೆಗಳು ಬಹುಸಂಖ್ಯಾತ. ಅವುಗಳಲ್ಲಿ ದುಡಿಯುವ ಕಾರ್ಮಿಕರಲ್ಲದೆ ಅಧಿಕಾರೀ ವರ್ಗವೂ ಇದೆಯೆಂಬುದು ಸರ್ವವಿದಿತ. ಕಾರ್ಖಾನೆಯ ಪ್ರಗತಿಗೆ ಕಾರ್ಮಿಕರೆಷ್ಟು ಕಾರಣರೋ ಅಷ್ಟೇ ಈ ಅಧಿಕಾರೀ ವರ್ಗದವರು. ಉದ್ಯಮದ ಅತ್ಯುನ್ನತ ಸ್ತರದಲ್ಲಿರುವ ಅಧಿಕಾರಿಗಳಾದ ನಿರ್ದೇಶಕರು ರೂಪಿಸಿದ ಯೋಜನೆಗಳನ್ನು ಸಾಕಾರಗೊಳಿಸಲು ಕಾರ್ಮಿಕವರ್ಗ ಮತ್ತು ಇದೇ ನಿರ್ದೇಶಕರ ನಡುವೆ ಕೊಂಡಿಯಾಗಿ ಮಧ್ಯಮವ್ಯಾಯೋಗದಲ್ಲಿದ್ದುಕೊಂಡು ಕಾರ್ಯನಿರ್ವಹಿಸುವ ಅಧಿಕಾರಿಗಳ ಬದುಕು-ಬವಣೆಗಳು ಎಷ್ಟೋ ಸಂದರ್ಭಗಳಲ್ಲಿ ಮೊಳಕೈಗೆ ಚಿಲಕ ತಾಗಿದಂತೆ - unsung, unwept and unhonoured. ಕವನ ಕಟ್ಟಿ ತಮ್ಮ ತುತ್ತೂರಿಯನ್ನು ಊದಲು ವ್ಯವಧಾನವಿಲ್ಲದವರ ಹಾಡಿದು.


ಕವನ ಕಾವ್ಯಗಳ
ಹವನ ಹೋಮಗಳಿಗೆ ನಾವಲ್ಲ
ಭವನಗಳವು ಹವಳ ದಂತಗಳ
ಕಾವ ಭಾವಗಳು ಗಟ್ಟಿಸದ
ಬೇವಾರಿಸಿಗಳು ನಾವೆಲ್ಲ
ಯಂತ್ರಗಳೊಡನೆ ಯಂತ್ರಗಳಾಗಿ
ತಂತ್ರಜ್ಞರೆಂಬ ಮಾಂತ್ರಿಕರಾಗಿ
ಉತ್ಪಾದನೆಯ ಬಹುದೃಷ್ಟ ಧ್ರಷ್ಟಾರರು
ಅಯೋಜಿತ ಯೋಚನೆಗಳ
ಅವಿವೇಚಿತ ಯೋಜನೆಗಳ
ವಾರ್ಷಿಕ ಧ್ಯೇಯಗಳ
ತುದಿಗೊನೆ ಒಂದಾಗಿಸುವಲ್ಲಿ
ನೆನೆಗುದಿಯ ನೇಪಥ್ಯದಲ್ಲಿ
ಜೀವನ - ನಾಟಕ, ಪ್ರಹಸನ
ದಿನದಿನ ಮರಣ
ನಿಂತ ನೆಲ ಸ್ಥಿರವಲ್ಲ
ಹೊಸಪದವಿ ಘನಕಾರ್ಯಗೌರವ
ದಪ್ಪನೆಯ ಪೇ-ಕವರುಗಳ ಗಳಿಕೆ
ಅಪ್ಪಮ್ಮಂದಿರ ನೆಮ್ಮದಿ, ಹೆಗ್ಗಳಿಕೆ
ಮಡದಿ-ಮಕ್ಕಳ ಉದ್ದನೆಯ ಬೇಡಿಕೆ...
ಕಾವ್ಯಕನ್ನಿಕೆ, ಆಸೆ-ಅನ್ನಿಸಿಕೆ
ಬಡಬಾಗ್ನಿ - ಕಿಬ್ಬೊಟ್ಟೆಯೊಳಗೆ
ಅರುವತ್ತರವರೆಗೆ ಸತ್ತೂ ಸತ್ತು,
ಸತ್ತ್ವಹೋದ ಬಳಿಕ
ಹೊರಗೊದ್ದು ಬಿದ್ದಾಗ
ನಿತ್ಯ ಸತ್ತು ಕೊಳೆತಾತ್ಮ ಉರಿದ ಬೂದಿ -
ನೊಸಲಿನಕ್ಷರ
-Prabhu Iynanda

Submitted on: Mon Dec 10 2012 02:26:31 GMT-0800 (PST)
Category: Original
Language: Kannada
Copyright: A Billion Stories (http://www.abillionstories.com)
Submit your own work at http://www.abillionstories.com
Read submissions at http://abilionstories.wordpress.com
Submit a poem, quote, proverb, story, mantra, folklore in your own language at http://www.abillionstories.com/submit
Comments